ಬೆಂಗಳೂರು: ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಕೇಂದ್ರ ಗೃಹ ಸಚಿವಾಲಯವು ‘ವಂದೇ ಮಾತರಂ’ನ ಆರು ಚರಣಗಳನ್ನು ಹಾಡುವಂತೆ ನೀಡಿದ್ದ ಮಾರ್ಗಸೂಚಿಗೆ ಪ್ರತಿಯಾಗಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಸಚಿವ ಸಂಪುಟದ ತೀರ್ಮಾನದಂತೆ ಆದೇಶ ಹೊರಡಿಸಲಾಗಿದ್ದು, ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕರೂಪತೆ, ಗೌರವ ಹಾಗೂ ಸೂಕ್ತ ಶಿಷ್ಟಾಚಾರ ಕಾಪಾಡುವುದು ಇದರ ಉದ್ದೇಶ ಎಂದು ಸರ್ಕಾರ ತಿಳಿಸಿದೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳಲ್ಲಿ ಮಾತ್ರ ಆರು ಚರಣಗಳನ್ನು ಹಾಡಲು ಸೂಚಿಸಲಾಗಿದೆ. ಕಾಂಗ್ರೆಸ್ ಕೂಡ ಕೋಮು ಸೌಹಾರ್ದತೆ ಮತ್ತು ಕಾರ್ಯಕ್ರಮಗಳ ಏಕರೂಪತೆ ದೃಷ್ಟಿಯಿಂದ ಎರಡು ಚರಣಗಳನ್ನು ಮಾತ್ರ ಹಾಡುವ ನಿಲುವು ಹೊಂದಿದೆ ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.









