ಬೆಂಗಳೂರು (Bengaluru) ಹೊರವಲಯದ ಜಿಗಣಿ (Jigani) ಸಮೀಪದ ಕಲ್ಲುಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ SIR ಪ್ರಕ್ರಿಯೆಯು ತೀವ್ರ ಗೊಂದಲಕ್ಕೆ ಕಾರಣವಾಗಿದ್ದು, ಕಚೇರಿಗಳಿಗೆ ಅಲೆದಾಡಿ ಬೇಸತ್ತ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹೌದು, ಈಗಾಗಲೇ ಎಸ್‌ಐಆರ್ (SIR) ಪ್ರಕ್ರಿಯೆ ಪೂರ್ಣಗೊಳಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಸಹ `ನಿಮ್ಮ ವೋಟರ್ ಐಡಿ ಕ್ಯಾನ್ಸಲ್ ಆಗಿದೆ’ ಎಂದು ಸಾರ್ವಜನಿಕರಿಗೆ ನೋಟಿಸ್ ಕಳುಹಿಸಲಾಗಿದೆ. ಸರ್ಕಾರ ನೀಡಿದ ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಹತ್ತಾರು ಅಧಿಕೃತ ದಾಖಲೆಗಳನ್ನು ತೋರಿಸಿದರೂ ಅಧಿಕಾರಿಗಳು ಅವುಗಳನ್ನು ಪರಿಗಣಿಸಲು ನಿರಾಕರಿಸುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಜೊತೆಗೆ 71 ವರ್ಷದ ಹಿರಿಯ ನಾಗರಿಕರಿಗೂ ಮಾರ್ಕ್ಸ್ ಕಾರ್ಡ್ ಹಾಗೂ ಜನ್ಮ ಪ್ರಮಾಣ ಪತ್ರ ತರಲು ಅಧಿಕಾರಿಗಳು ಪಟ್ಟು ಹಿಡಿದಿದ್ದು, ಈ ಇಳಿ ವಯಸ್ಸಿನಲ್ಲಿ ಎಲ್ಲಿಂದ ತರುವುದು ಎಂದು ಹಿರಿಯ ನಾಗರಿಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಮತ್ತೊಬ್ಬ ನಿವಾಸಿ ಮಾತನಾಡಿ ನಾನು ಕರ್ನಾಟಕದಲ್ಲೇ ಹುಟ್ಟಿ ಬೆಳೆದ ನಿವಾಸಿಯಾಗಿದ್ದೇನೆ. ಆದರೆ ಈಗ ನನ್ನ ವಿಳಾಸ ತಮಿಳುನಾಡಿಗೆ ಬದಲಾಗಿದೆ ಎಂದು ಬಿಎಲ್‌ಒ ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಅಧಿಕಾರಿಗಳೇ ಎಡವಟ್ಟು ಮಾಡಿದ್ದಾರೆ. ಅಷ್ಟೇ ಅಲ್ಲದೆ, ತಮಿಳುನಾಡಿನಲ್ಲಿ ವಿಳಾಸ ರದ್ದು ಮಾಡಿಕೊಂಡು ಬನ್ನಿ ಎಂದು ನಿವಾಸಿಗಳಿಗೆ ಹೇಳುತ್ತಿದ್ದಾರೆ. ನಾವು ಎಲ್ಲಿ ಅಂತ ಹೋಗುವುದು, ದಯಮಾಡಿ ಚುನಾವಣಾ ಆಯೋಗ ಇದರ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ










