ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸೇರಿದಂತೆ ಖಾಸಗಿ ಸಂಘ, ಸಂಸ್ಥೆಗಳು ಮತ್ತು ಸಂಘಟನೆಗಳು ಸರ್ಕಾರಿ ಆವರಣ, ಶಾಲಾ-ಕಾಲೇಜುಗಳ ಆಸ್ತಿ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಬಳಸುವುದಕ್ಕೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ‘ಕರ್ನಾಟಕ ಸರ್ಕಾರಿ ಆವರಣ ಹಾಗೂ ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ 2026’ಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹೊಸ ವಿಧೇಯಕವನ್ನು RSS ಅನ್ನು ಗುರಿಯಾಗಿಸಿಕೊಂಡು ತರಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವ ಸಂಘ, ಸಂಸ್ಥೆಗಳು ಹಾಗೂ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅವಕಾಶವನ್ನು ವಿಧೇಯಕದಲ್ಲಿ ಕಲ್ಪಿಸುವ ಸಾಧ್ಯತೆ ಇದೆ. ಜೈಲು ಶಿಕ್ಷೆ ಹಾಗೂ ನಗದು ದಂಡ ವಿಧಿಸುವ ಪ್ರಸ್ತಾವವೂ ಇರಬಹುದು ಎಂದು ಹೇಳಲಾಗಿದೆ.
ಗುರುವಾರದಿಂದ ಮುಂಗಾರು ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಪ್ರಮುಖ ಅಧಿವೇಶನ ಇದಾಗಿದೆ. ಇದೇ ಅಧಿವೇಶನದಲ್ಲಿ ನೂತನ ವಿಧೇಯಕವನ್ನು ಮಂಡಿಸಿ ಅಂಗೀಕರಿಸುವ ಸಾಧ್ಯತೆ ಇದೆ. ವಿಧೇಯಕದ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆ ನಡೆಯುವ ನಿರೀಕ್ಷೆಯಿದೆ.










