ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯನ್ನು ಶೀಘ್ರದಲ್ಲೇ ತೆರೆಯದಿದ್ದರೆ ಇರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ವಾರಾಂತ್ಯದ ವೇಳೆಗೆ ಹಡಗುಗಳ ಸಂಚಾರ ಪುನರಾರಂಭಿಸುವ ಕುರಿತು ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹಾಗೂ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿನ ಪರಿಸ್ಥಿತಿಯಿಂದ ಜಾಗತಿಕ ತೈಲ ಪೂರೈಕೆಯ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಇದೇ ವೇಳೆ ಜಾಗತಿಕ ತೈಲ ಬೆಲೆ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.5ರಷ್ಟು ಕುಸಿದು ಬ್ಯಾರೆಲ್‌ಗೆ 80 ಡಾಲರ್‌ಗಿಂತ ಕೆಳಗೆ ಇಳಿದಿದೆ. ಪೂರೈಕೆ ಅಡಚಣೆಗಳು ಕಡಿಮೆಯಾಗುವ ನಿರೀಕ್ಷೆಯೇ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಏಷ್ಯಾದ ವಹಿವಾಟಿನಲ್ಲಿಯೂ ಬುಧವಾರ ಬ್ರೆಂಟ್ ಕಚ್ಚಾ ತೈಲದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬಂದಿದೆ. ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆ ಪುನರಾರಂಭಗೊಂಡರೆ ಜಾಗತಿಕ ತೈಲ ಪೂರೈಕೆ ಮೇಲಿನ ಒತ್ತಡ ಕಡಿಮೆಯಾಗುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ತೈಲ ಬೆಲೆಗಳ ಮೇಲೂ ಅದರ ಪರಿಣಾಮ ಕಂಡುಬರಬಹುದು.










