ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 1) ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಇಲ್ಲಿನ ಶ್ರೀರಾಮಕೃಷ್ಣ ಆಶ್ರಮದಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿ ತಾಯಿ ಚಾಮುಂಡೇಶ್ವರಿಗೆ ನಮನ ಸಲ್ಲಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿ ಗಮನ ಸೆಳೆದರು. ಹಾಗಾದ್ರೆ ಏನೆಲ್ಲಾ ಹೇಳಿದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮೈಸೂರಿನ ಕಣ ಕಣದಲ್ಲೂ ಕಲೆ, ಸಂಸ್ಕೃತಿ ಮೇಳೈಸಿದೆ. ಮೈಸೂರು ಸಾಂಸ್ಕೃತಿಕ ಮತ್ತು ಐತಿಹಾಸಿಕ ಕೇಂದ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊಂಡಾಡಿದರು. ‘ನನ್ನ ಬೆಳವಣಿಗೆಯಲ್ಲಿ ರಾಮಕೃಷ್ಣ ಆಶ್ರಮದ ಪ್ರಭಾವ ಬಹಳ ಹೆಚ್ಚಿದೆ. ಮೈಸೂರು ಪವಿತ್ರ ಭೂಮಿ. ಇಲ್ಲಿನ ಎಲ್ಲಾ ಸಂತರಿಗೂ ನನ್ನ ಪ್ರಣಾಮ,’ ಎಂದು ಹೇಳಿದರು.
‘ಮೈಸೂರು ಸಾಂಸ್ಕೃತಿಕ, ಐತಿಹಾಸಿಕ ಕೇಂದ್ರ. ದಸರಾ, ಸಂಗೀತ, ಕಲೆ ವಿಶ್ವಪ್ರಸಿದ್ಧಿ ಪಡೆದಿದೆ. ಮೈಸೂರಿನ ಕಣ ಕಣದಲ್ಲೂ ಕಲೆ, ಸಂಸ್ಕೃತಿ ಇದೆ. ರಾಷ್ಟ್ರಕವಿ ಕುವೆಂಪು ಮೈಸೂರಿನಲ್ಲಿದ್ದರು. ಅವರಿಗೂ ರಾಮಕೃಷ್ಣ ಆಶ್ರಮಕ್ಕೂ ಅವಿನಾಭಾವ ಸಂಬಂಧ ಇತ್ತು. ಜೀವನದಲ್ಲಿ ಪರೀಕ್ಷೆಗಳು ದಿನವೂ ಬರುತ್ತವೆ. ಇವುಗಳನ್ನ ಎದುರಿಸಿಕೊಂಡೇ ಸಾಧಿಸಬೇಕು. ಈ ಸಾಧನೆಗೆ ಸಂತರ ಆಶೀರ್ವಾದ, ಪ್ರೇರಣೆ ತುಂಬಾ ಮುಖ್ಯ. ಸ್ವಾಮಿ ವಿವೇಕಾನಂದರನ್ನು ಮೈಸೂರು ಮಹಾರಾಜರು ಇಲ್ಲಿದೆ ಕರೆಸಿದ್ದರು. ಅವರು ಭಾರತೀಯ ಯುವಜನರ ಚೇತನ,’ ಎಂದು ಹೇಳಿದರು.
‘ವಿವೇಕ ಸ್ಮಾರಕ ಸಾಧಕರಿಗೆ ಒಂದು ಧಾನ್ಯ ಕೇಂದ್ರ. ಯುವಕರಿಗೆ ರಾಷ್ಟ್ರವೇ ಮೊದಲು. ದೇಶ ಕಟ್ಟುವ ಕೆಲಸ ಚಿಂತನೆ. ಭಾರತೀಯ ಯುವಕರು ಹಿಂದೆ ಗುಲಾಮಿ ಮನಸ್ಥಿತಿಯಲ್ಲಿ ಇದ್ದರು. ಈಗ ಯುವಕರು ಉತ್ತಮ ಮನಸ್ಥಿತಿಯಲ್ಲಿದ್ದಾರೆ. ಅವರ ಮನಸ್ಥಿತಿ ಬದಲಾದ ಹಿನ್ನೆಲೆ ಇಡೀ ದೇಶದ ಪ್ರಗತಿ ಬದಲಾಗಿದೆ. ಭಾರತ ಇವತ್ತು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಪ್ರಮುಖ ಕಾರಣ ಯುವಜನರು. ಎಲ್ಲಾ ವಲಯದಲ್ಲೂ ಯುವಸಮೂಹದ ಪ್ರಗತಿಯ ಹೆಜ್ಜೆ ಗುರುತು ಮೂಡಿಸಿದ್ದಾರೆ. ಅವರೇ ದೇಶದ ಶಕ್ತಿ ಆಗುತ್ತದೆ,’ ಎಂದು ತಿಳಿಸಿದರು.
‘ನಮ್ಮ ದೇಶದಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ. ಕಳೆದ 12 ವರ್ಷಗಳಲ್ಲಿ ದೇಶದ ಹಲವು ವಿಶ್ವವಿದ್ಯಾಲಯಗಳು, ಸಾವಿರಾರು ಕಾಲೇಜುಗಳು, ಹಲವು ಐಐಟಿಗಳನ್ನು ಸ್ಥಾಪನೆ ಮಾಡಲಾಗಿದೆ. ಮೆಡಿಕಲ್ ಕಾಲೇಜ್ ಸಂಖ್ಯೆ ಹೆಚ್ಚಾಗಿವೆ. ಯುವಸಮೂಹಕ್ಕಾಗಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ದೊಡ್ಡಮಟ್ಟದಲ್ಲಿ ಸುಧಾರಿಸಿದ್ದೇವೆ,’ ಎಂದು ತಿಳಿಸಿದರು.










