ಕನ್ನಡ ಚಿತ್ರರಂಗದ ಹಿರಿಯ ನಟಿ ಊರ್ವಶಿ ಮತ್ತೆ ಸ್ಯಾಂಡಲ್ವುಡ್ಗೆ ಮರಳುತ್ತಿದ್ದಾರೆ. 1984ರಲ್ಲಿ ಡಾ. ರಾಜ್ಕುಮಾರ್ ಅಭಿನಯದ ಶ್ರಾವಣಬಂತು ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದ ಅವರು, ಹಬ್ಬ, ರಾಮ ಶ್ಯಾಮ ಭಾಮ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಇದೀಗ ಅವರು ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದ್ದು, ಈ ಬಾರಿ ತಮ್ಮ ಪುತ್ರಿ ತೇಜಾಲಕ್ಷ್ಮಿಯನ್ನೂ ಕನ್ನಡಕ್ಕೆ ಪರಿಚಯಿಸುತ್ತಿದ್ದಾರೆ.
ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ, ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ ಬುಲ್ಲಿ ಚಿತ್ರದ ಮೂಲಕ ತೇಜಾಲಕ್ಷ್ಮಿ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಈಗಾಗಲೇ ಅಭಿನಯಿಸಿರುವ ತೇಜಾಲಕ್ಷ್ಮಿಗೆ ಇದು ಮೊದಲ ಕನ್ನಡ ಚಿತ್ರವಾಗಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಈ ಚಿತ್ರದಲ್ಲಿ ಊರ್ವಶಿ ಅವರು ನಾಯಕನ ತಾಯಿ ಯಶೋದಮ್ಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಅವರ 729ನೇ ಸಿನಿಮಾ ಎಂಬ ವಿಶೇಷತೆಯನ್ನೂ ಹೊಂದಿದೆ. ತಾಯಿ-ಮಗಳು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ, ಅದೂ ಕನ್ನಡ ಸಿನಿಮಾದ ಮೂಲಕ ತೆರೆ ಹಂಚಿಕೊಳ್ಳುತ್ತಿರುವುದು ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.










