ತನ್ನ ಮೇಲೆ ವಿಶ್ವಾಸವಿಲ್ಲದ ರಾಜಕಾರಣಿಯೇ ಜಾತಿಯ ಆಶ್ರಯ ಪಡೆಯೋದು: ಸಂಸದ ಸುಧಾಕರ್..

ಕೆಂಪೇಗೌಡ ಜಯಂತಿ ವೇಳೆ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಮೇಲೆ ಚಪ್ಪಲಿ ಎಸೆತ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆಗೆ ಸಂಸದ ಡಾ.ಕೆ.ಸುಧಾಕರ್(Dr K Sudhakar) ಹಾಗೂ ಅವರ ತಂದೆ ಕೇಶವ ರೆಡ್ಡಿ ಕಾರಣ ಎಂದು ಬಲಿಜ ಸಮುದಾಯದ ಕೆಲ ಮುಖಂಡರು ಎಸ್‌ಪಿಗೆ ದೂರು ನೀಡಿರುವ ವಿಚಾರಕ್ಕೆ ಸಂಸದ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

 

ಚಿಕ್ಕಬಳ್ಳಾಪುರದ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ತನ್ನ ಮೇಲೆ ವಿಶ್ವಾಸವಿಲ್ಲದ ರಾಜಕಾರಣಿಯೇ ಜಾತಿಯ ಆಶ್ರಯ ಪಡೆಯಲು ಮುಂದಾಗುತ್ತಾನೆ ಎಂದು ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.

 

ಜಾತಿಯನ್ನು ರಾಜಕೀಯದ ರಕ್ಷಣಾ ಕವಚವನ್ನಾಗಿ ಬಳಸಬಾರದು. ಕೈವಾರ ತಾತಯ್ಯನವರ ಮೇಲೆ ತಮಗೂ ಅಪಾರ ಭಕ್ತಿ ಇದೆ ಎಂದು ಹೇಳಿದ ಅವರು, ಬಲಿಜ ಸಮುದಾಯದ ಎಲ್ಲರೂ ತಮ್ಮ ವಿರುದ್ಧ ಇಲ್ಲ. ಕೆಲವೇ ಕೆಲವು ಮಂದಿ ಮಾತ್ರ ತಮ್ಮ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

 

ಬಲಿಜ ಸಮುದಾಯದ ಅನೇಕ ಮುಖಂಡರು ತಮ್ಮ ಬೆಂಬಲದಲ್ಲಿದ್ದು, ತಾವು ಎಲ್ಲ ಸಮುದಾಯಗಳ ಜನರೊಂದಿಗೆ ಸಹೋದರತ್ವದ ಸಂಬಂಧ ಹೊಂದಿದ್ದೇನೆ ಎಂದು ತಿಳಿಸಿದರು. ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ತಾವು ಮಾತನಾಡುತ್ತಿಲ್ಲ. ಸಮಾಜದ ಎಲ್ಲ ವರ್ಗದ ಜನರ ವಿಶ್ವಾಸ ಮತ್ತು ಬೆಂಬಲ ತಮ್ಮೊಂದಿಗಿದೆ ಎಂದು ಸುಧಾಕರ್ ಹೇಳಿದರು.

 

ಇದೇ ವೇಳೆ ಅಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಹಣ ಕಳವು ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸಂಸದ ಡಾ. ಕೆ. ಸುಧಾಕರ್, ಈ ಘಟನೆಯನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

 

ಅಯೋಧ್ಯೆ ರಾಮಮಂದಿರದಲ್ಲಿ ಹುಂಡಿ ಹಣ ಕಳವಾಗಿರುವುದು ದುರದೃಷ್ಟಕರ ಘಟನೆ. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದನ್ನೂ ಓದಿ: 15ನೇ ವಯಸ್ಸಿಗೇ ಟೀಂ ಇಂಡಿಯಾಗೆ ಪದಾರ್ಪಣೆ – ಕ್ರಿಕೆಟ್‌ ದೇವರ ದಾಖಲೆ ಮುರಿದ ಸೂರ್ಯವಂಶಿ

 

ಮಂದಿರಕ್ಕೆ ಹೋಗದ ಕಾಂಗ್ರೆಸ್ ನಾಯಕರಿಗೆ ಈಗ ಭಕ್ತಿ ಉಕ್ಕಿ ಬಂದಿದೆ. ಈ ಹಿಂದೆ ಶ್ರೀರಾಮ ಕಾಲ್ಪನಿಕ ಎಂದು ಕಾಂಗ್ರೆಸ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ ಎಂದು ಟೀಕಿಸಿದರು.

 

ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಬಾರದು. ಈ ಹಿಂದೆಯೂ ದೇಶದ ವಿವಿಧ ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.

   SHARE  

Facebook
Twitter
Telegram
WhatsApp

   TOP NEWS  

   RECENT NEWS