ರಾಜ್ಯದಲ್ಲಿ ಎಸ್ಐಆರ್(SIR) ಪ್ರಕ್ರಿಯೆ ಕುರಿತು ವಿವಾದ ಮುಂದುವರಿದಿರುವ ನಡುವೆಯೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(H D Kumaraswamy) ಕುಟುಂಬ ಸಮೇತ ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.
ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಪುರಸಭೆ ಅಧಿಕಾರಿಗಳು ಎಸ್ಐಆರ್ ಪ್ರಕ್ರಿಯೆ ನಡೆಸಿದರು. ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ಭಾಗವಹಿಸಿದ್ದರು. ಅಧಿಕಾರಿಗಳು ನೀಡಿದ ಅರ್ಜಿಗಳನ್ನು ಭರ್ತಿ ಮಾಡಿ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಕುಮಾರಸ್ವಾಮಿ ಕುಟುಂಬ ಮಾಗಡಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿದ್ದು, ಮಾಗಡಿ ತಹಶೀಲ್ದಾರ್ ರಂಜಿತ್ ನೇತೃತ್ವದಲ್ಲಿ ಪ್ರಕ್ರಿಯೆ ನಡೆಯಿತು.
2004ರಿಂದ ಕೇತಗಾನಹಳ್ಳಿಯಲ್ಲೇ ಮತದಾನ
ಎಸ್ಐಆರ್ ಪ್ರಕ್ರಿಯೆ ಬಳಿಕ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, 2004ರಿಂದ ನಮ್ಮ ಕುಟುಂಬ ಕೇತಗಾನಹಳ್ಳಿಯಲ್ಲೇ ಮತದಾನ ಮಾಡುತ್ತಿದೆ. ಇಂದು ಎಸ್ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದೇವೆ. ಅಧಿಕಾರಿಗಳು ನಿಯಮಾವಳಿ ಪ್ರಕಾರ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಎಸ್ಐಆರ್ನಲ್ಲಿ ನಿಯಮ ಉಲ್ಲಂಘನೆ ಆರೋಪ
ಈಗಾಗಲೇ ರಾಜ್ಯ ಸರ್ಕಾರದ ನಡವಳಿಕೆ ಎಲ್ಲರಿಗೂ ಗೊತ್ತಾಗಿದೆ. ಪ್ರಾಮಾಣಿಕವಾಗಿ ನಡೆಯಬೇಕಿದ್ದ ಎಸ್ಐಆರ್ ಪ್ರಕ್ರಿಯೆಯ ನಿಯಮಾವಳಿಯನ್ನು ಗಾಳಿಗೆ ತೂರಲಾಗಿದೆ, ಛತ್ರಗಳು, ಸಂತೆ ಮೈದಾನಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಎಸ್ಐಆರ್ ನಡೆಸಲಾಗುತ್ತಿದೆ. ಚುನಾವಣಾ ಆಯೋಗದ ಸೂಚನೆಯಂತೆ ರಾಜ್ಯದ ಅಧಿಕಾರಿಗಳು ಕೆಲಸ ಮಾಡಬೇಕು. ಆದರೆ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸುವ ಬದಲು ಒಂದೇ ಸ್ಥಳದಲ್ಲಿ ಜನರನ್ನು ಸೇರಿಸಿ ಎಸ್ಐಆರ್ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ನಕಲಿ ಮತದಾರರನ್ನು ಸೃಷ್ಟಿಸಲು ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಎಸ್ಐಆರ್ ವಿಚಾರದಲ್ಲಿ ಕಾಂಗ್ರೆಸ್ ಈ ಹಿಂದೆ ವಿರೋಧ ಪಕ್ಷದ ಮತಗಳನ್ನು ಅಳಿಸಲಾಗುತ್ತಿದೆ ಎಂದು ಆರೋಪ ಮಾಡಿತ್ತು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಎಸ್ಐಆರ್ ಬಗ್ಗೆ ಕಾಂಗ್ರೆಸ್ ಕೋಳಿಗಳ ರೀತಿಯಲ್ಲಿ ಕೆದಕಿ ಮಾತನಾಡುತ್ತಿತ್ತು. ಈಗ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಗೃಹ ಸಚಿವರು ಯಾಕೆ ಮೌನವಾಗಿದ್ದಾರೆ? ಅಕ್ರಮ ನಡೆಯುತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಚುನಾವಣಾ ಆಯೋಗಕ್ಕೆ ದೂರು
ಕೆಲವು ಜಿಲ್ಲಾಧಿಕಾರಿಗಳ ವೈಫಲ್ಯದಿಂದ ಎಸ್ಐಆರ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಕುಣಿಗಲ್ ರಂಗನಾಥ್ಗೆ ತಿರುಗೇಟು
ದೇವೇಗೌಡರ ಕುಟುಂಬದ ಜೀನ್ ಬಗ್ಗೆ ಕುಣಿಗಲ್ ರಂಗನಾಥ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಡಾಕ್ಟರ್ ಅಲ್ಲ. ಆ ಕುಟುಂಬದ ಜೀನ್ಸ್ ಕನಕಪುರದಿಂದ ವಿದೇಶಕ್ಕೂ ಹೋಗುತ್ತೆ. ಆರ್.ಟಿ. ಲಕ್ಷಣ್ ಅವರ ಮಗಳನ್ನು ಬೀದಿಗೆ ತಂದ ರೀತಿ ಲೂಟಿ ಮಾಡುವ ಜೀನ್ ನನ್ನದಲ್ಲ. ನನ್ನ ಜೀನ್ ಇಡೀ ರಾಜ್ಯಕ್ಕೆ ಗೊತ್ತು. ಮೊದಲು ಗೌರವಯುತವಾಗಿ ಕೆಲಸ ಮಾಡಿ, ನಂತರ ಜೀನ್ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಶಿಕಾರಿಪುರಕ್ಕೆ ಶ್ರೀಲಂಕಾ ಸಂಸದ ಭೇಟಿ – ಬಿ.ವೈ. ರಾಘವೇಂದ್ರ ಜೊತೆ ಚರ್ಚೆ
ಟೌನ್ಶಿಪ್ ಯೋಜನೆ ಬಗ್ಗೆ ಸ್ಪಷ್ಟನೆ
ಬಿಡದಿ ಟೌನ್ಶಿಪ್ ಯೋಜನೆ ವಿಚಾರವಾಗಿ ಮಾತನಾಡಿದ ಅವರು, ರೈತರು ಈಗ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ನೆರವಾಗಲು ವಕೀಲರನ್ನು ನೇಮಿಸಲಾಗಿದೆ ಎಂದರು.
ಟೌನ್ಶಿಪ್ ಯೋಜನೆ ಪರ ಚರ್ಚೆಗೆ ಆಹ್ವಾನ ನೀಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾರೂ ಆಹ್ವಾನ ನೀಡಿಲ್ಲ. ನಾನು ಭೂಮಿ ಕಳೆದುಕೊಳ್ಳುವ ರೈತರ ಪರವಾಗಿ ಭೈರಮಂಗಲಕ್ಕೆ ಹೋಗಿದ್ದೆ. ರಾಜಕೀಯಕ್ಕಾಗಿ ಬಟ್ಟೆ ಬಿಚ್ಚಿಕೊಂಡು ಕುಳಿತಿರುವವರ ಜೊತೆ ಚರ್ಚೆ ಮಾಡಲು ನಾನು ಹೋಗುವುದಿಲ್ಲ ಎಂದರು.
2006ರಲ್ಲಿ ಐದು ಟೌನ್ಶಿಪ್ಗಳ ಬಗ್ಗೆ ಚಿಂತನೆ ನಡೆದಿದ್ದು ನಿಜ. ಆದರೆ ಆಗ ಯಾವುದೇ ಭೂಸ್ವಾಧೀನಕ್ಕೆ ಚಾಲನೆ ನೀಡಿರಲಿಲ್ಲ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಮ್ಮಿಂದ ಆಗಿಲ್ಲ. ರೈತರಿಗೆ ತೊಂದರೆ ಆಗಿರುವುದು ಈಗಿನ ಸರ್ಕಾರದ ಕ್ರಮಗಳಿಂದ ಎಂದು ಅವರು ಆರೋಪಿಸಿದರು.










