ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್‌ಗೇಟ್ಸ್ ಅವರು ತಮ್ಮ ಜೀವನದಲ್ಲಿ ಮೂರು ವಿವಾಹೇತರ ಸಂಬಂಧಗಳನ್ನು (ಅಫೇರ್) ಹೊಂದಿದ್ದಾಗಿ ಅಮೆರಿಕದ ಸಂಸದೀಯ ಸಮಿತಿಯ ವಿಚಾರಣೆಯ ವೇಳೆ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪಿ, ದಿವಂಗತ ಜೆಫ್ರಿ ಎಪ್‌ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮುಚ್ಚಿದ ಬಾಗಿಲಿನೊಳಗೆ ನಡೆದ ವಿಚಾರಣೆಯಲ್ಲಿ ಈ ಸ್ಫೋಟಕ ವಿಚಾರ ಹೊರಬಿದ್ದಿದೆ. ವಿಚಾರಣೆಯ ವೇಳೆ ಗೇಟ್ಸ್ ಅವರು, ರಷ್ಯಾದ ಇಬ್ಬರು ಮಹಿಳೆಯರಾದ ಬ್ರಿಡ್ಜ್ ಆಟಗಾರ್ತಿ ಮಿಲಾ ಆಂಟೊನೊವಾ ಹಾಗೂ ಪರಮಾಣು ವಿಜ್ಞಾನಿ ಕರೀಮಾ ನಿಗ್ಮತುಲಿನಾ ಜೊತೆಗೆ, ವೈದ್ಯಕೀಯ ಉದ್ಯಮಿ ಡಾ. ಆಲಿಸ್ ಜೇಕಬ್ಸ್ ಅವರೊಂದಿಗೂ ತಾನು ಅಕ್ರಮ ಸಂಬಂಧ ಹೊಂದಿದ್ದೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ.
ಕುಖ್ಯಾತ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ತನ್ನ ಈ ಅಫೇರ್‌ಗಳ ಬಗ್ಗೆ ತಿಳಿದುಕೊಂಡಿದ್ದ ಹಾಗೂ ಇದೇ ವಿಚಾರವನ್ನು ಮುಂದಿಟ್ಟುಕೊಂಡು ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದ ಎಂಬುದನ್ನು ಸಹ ಬಿಲ್‌ಗೇಟ್ಸ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ. ಎಪ್‌ಸ್ಟೀನ್ ಜೊತೆಗಿನ ಸಂಪರ್ಕವನ್ನು ಕಡಿದುಕೊಳ್ಳಲು ಗೇಟ್ಸ್ ಯತ್ನಿಸಿದಾಗ, ಈ ವಿವಾಹೇತರ ಸಂಬಂಧಗಳ ಮಾಹಿತಿಯನ್ನು ಬಳಸಿಕೊಂಡು ಆತ ಮರಳಿ ತನ್ನೊಂದಿಗೆ ವ್ಯವಹಾರ ಮುಂದುವರಿಸುವಂತೆ ಒತ್ತಡ ಹೇರಲು ಪ್ರಯತ್ನಿಸಿದ್ದ. ಆದರೆ, ಆತ ತನ್ನಿಂದ ನೇರವಾಗಿ ಹಣದ ಬೇಡಿಕೆ ಇಟ್ಟಿರಲಿಲ್ಲ ಅಥವಾ ಆತನ ಬ್ಲ್ಯಾಕ್‌ಮೇಲ್ ತಂತ್ರ ಯಶಸ್ವಿಯಾಗಿರಲಿಲ್ಲ ಎಂದು ಗೇಟ್ಸ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಎಪ್‌ಸ್ಟೀನ್‌ನಂತಹ ಅಪರಾಧಿಯನ್ನು ಭೇಟಿಯಾಗಿದ್ದು ತನ್ನ ಜೀವನದ ಬಹುದೊಡ್ಡ ತಪ್ಪು ಎಂದು ಅವರು ವಿಷಾದಿಸಿದ್ದಾರೆ.
ಇದೇ ವೇಳೆ, ಈ ವಿವಾಹೇತರ ಸಂಬಂಧಗಳಿಂದಾಗಿ ತನಗೆ ಲೈಂಗಿಕ ರೋಗ (STD) ತಗುಲಿತ್ತು ಎಂಬ ವದಂತಿಗಳನ್ನು ಬಿಲ್‌ಗೇಟ್ಸ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಎಪ್‌ಸ್ಟೀನ್ ತನ್ನ ವಿರುದ್ಧ ಸುಳ್ಳು ಹಾಗೂ ಸತ್ಯಗಳನ್ನು ಬೆರೆಸಿ ಬ್ಲ್ಯಾಕ್‌ಮೇಲ್ ತಂತ್ರ ರೂಪಿಸಿದ್ದನೇ ಹೊರತು, ತನಗೆ ಯಾವುದೇ ರೀತಿಯ ರೋಗವಿರಲಿಲ್ಲ ಮತ್ತು ತಾನು ಯಾರಿಗೂ ಗುಟ್ಟಾಗಿ ಔಷಧಿ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಅಫೇರ್‌ಗಳಿಗೂ ಎಪ್‌ಸ್ಟೀನ್‌ನ ಕ್ರಿಮಿನಲ್ ಚಟುವಟಿಕೆಗಳಿಗೂ ಯಾವುದೇ ಸಂಬಂಧವಿಲ್ಲ; ಆದರೆ, ತನ್ನ ಈ ತಪ್ಪಿನಿಂದ ಕುಟುಂಬಕ್ಕೆ ತೀವ್ರ ನೋವಾಗಿದೆ ಎಂದು ಹೇಳಿಕೊಂಡಿರುವ ಬಿಲ್‌ಗೇಟ್ಸ್ ಹೇಳಿಕೆಯು ಇದೀಗ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ.










