ತಮಿಳು ಚಿತ್ರರಂಗದ ದಿಗ್ಗಜರಾದ ಸೂಪರ್‌ಸ್ಟಾರ್ ರಜನೀಕಾಂತ್ ಹಾಗೂ ಕಮಲ್ ಹಾಸನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಧರ್ಮನ್’ (ತಲೈವರ್ 173) ಸಿನಿಮಾ, ಸೆಟ್ಟೇರುವ ಮುನ್ನವೇ ಪದೇ-ಪದೇ ನಿರ್ದೇಶಕರ ಬದಲಾವಣೆಯಿಂದಾಗಿ ಭಾರಿ ಸುದ್ದಿ ಮಾಡಿತ್ತು. ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿ ನಾಯಕನಾಗಿ ನಟಿಸುತ್ತಿರುವ ಈ ಮೆಗಾ ಪ್ರಾಜೆಕ್ಟ್‌ಗೆ ಅಂತಿಮವಾಗಿ ಯುವ ನಿರ್ದೇಶಕ ಅಶ್ವಥ್ ಮಾರಿಮುತ್ತು ಅವರನ್ನು ಫೈನಲ್ ಮಾಡಲಾಗಿದೆ. ಇತ್ತೀಚೆಗೆ ನಡೆದ ಚಿತ್ರದ ಕಾರ್ಯಕ್ರಮವೊಂದರಲ್ಲಿ ಸ್ವತಃ ರಜನೀಕಾಂತ್ ಅವರೇ ಈ ಚಿತ್ರಕ್ಕೆ ಮೂರು ಬಾರಿ ನಿರ್ದೇಶಕರು ಬದಲಾಗಲು ಅಸಲಿ ಕಾರಣವೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಈ ಮೆಗಾ ಪ್ರಾಜೆಕ್ಟ್‌ಗೆ ಮೊದಲು ಹಿರಿಯ ನಿರ್ದೇಶಕ ಕೆ.ಎಸ್. ರವಿಕುಮಾರ್ ಅವರನ್ನು ಕರೆತರಲು ಯೋಜಿಸಲಾಗಿತ್ತು, ಆದರೆ ಅದು ಕೈಗೂಡಲಿಲ್ಲ. ತದನಂತರ ನಿರ್ದೇಶಕ ಸುಂದರ್ ಸಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿತ್ತು. ಆದರೆ, ಇಬ್ಬರು ದಿಗ್ಗಜರ ಸಿನಿಮಾವನ್ನು ನಿಭಾಯಿಸುವ ಒತ್ತಡ ಹಾಗೂ ತಮ್ಮ ಕ್ರಿಯೇಟಿವ್ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು ಎಂಬ ಕಾರಣ ನೀಡಿ ಅವರು ಚಿತ್ರದಿಂದ ಹೊರಬಂದರು. ಆ ಬಳಿಕ ಸಿಬಿ ಚಕ್ರವರ್ತಿ ಅವರಿಗೆ ಮಣೆಹಾಕಲಾಗಿತ್ತು. ಅವರು ಸಿದ್ಧಪಡಿಸಿದ್ದ ಅಣು ವಿಜ್ಞಾನಿಯ ಕಥೆ ರಜನಿಗೆ ಇಷ್ಟವಾದರೂ, ಅದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದರ ಜೊತೆಗೆ ಅಫ್ಘಾನಿಸ್ತಾನ ಮತ್ತು ರಷ್ಯಾದಲ್ಲಿ ಚಿತ್ರೀಕರಣ ಮಾಡಬೇಕಿದ್ದ ಕಾರಣ, ಹೆಚ್ಚು ಸಮಯ ಹಿಡಿಯುತ್ತದೆ ಎಂದು ಸದ್ಯಕ್ಕೆ ಆ ಪ್ರಾಜೆಕ್ಟ್ ಅನ್ನು ಮುಂದೂಡಲಾಯಿತು.
ಹೀಗೆ ಸತತವಾಗಿ ಮೂರು ನಿರ್ದೇಶಕರು ಬದಲಾದ ಬಳಿಕ, ಅಂತಿಮವಾಗಿ ಯುವ ನಿರ್ದೇಶಕ ಅಶ್ವಥ್ ಮಾರಿಮುತ್ತು ಹೇಳಿದ ಕಥೆ ರಜನೀಕಾಂತ್ ಹಾಗೂ ನಿರ್ಮಾಪಕ ಕಮಲ್ ಹಾಸನ್ ಇಬ್ಬರಿಗೂ ವಿಪರೀತ ಇಷ್ಟವಾಯಿತು. ಈ ಚಿತ್ರದಲ್ಲಿ ರಜನೀಕಾಂತ್ ಅವರು ‘ಡೆಡ್ಲಿ ಡಾಕ್ಟರ್’ ಎಂಬ ವಿಭಿನ್ನ ಹಾಗೂ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ, ನಿರ್ದೇಶಕರ ಹುಡುಕಾಟದಲ್ಲಿದ್ದ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿರುವ ‘ಧರ್ಮನ್’ ಚಿತ್ರತಂಡ ಇದೀಗ ಭರದಿಂದ ಚಿತ್ರೀಕರಣ ಆರಂಭಿಸಿದ್ದು, ದಕ್ಷಿಣ ಭಾರತದ ಸಿನಿ ಪ್ರೇಕ್ಷಕರಲ್ಲಿ ಈ ಐತಿಹಾಸಿಕ ಕಾಂಬಿನೇಷನ್ ಬಗ್ಗೆ ನಿರೀಕ್ಷೆಗಳು ಮುಗಿಲುಮುಟ್ಟಿವೆ.










