ತಮಿಳು ನಟ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನನಾಯಗನ್’ ಚಲನಚಿತ್ರವು ಬಿಡುಗಡೆಗೂ ಮುನ್ನವೇ ಅಂತರ್ಜಾಲದಲ್ಲಿ ಸೋರಿಕೆಯಾಗಿರುವುದು ಚಿತ್ರತಂಡಕ್ಕೆ ಭಾರಿ ಆಘಾತ ನೀಡಿದೆ. ಈ ಪೈರಸಿ ವಿರುದ್ಧ ಭಾರತೀಯ ಚಿತ್ರರಂಗದ ಮೇರುನಟರು ಕೂಡ ಧ್ವನಿ ಎತ್ತಿದ್ದಾರೆ. ಈ ಬಗ್ಗೆ ತಕ್ಷಣವೇ ಕಾರ್ಯಪ್ರವೃತ್ತರಾದ ತಮಿಳುನಾಡು ಸೈಬರ್ ಕ್ರೈಂ ವಿಭಾಗದ ಪೊಲೀಸರು, ಪೈರಸಿ ದಂಧೆಯಲ್ಲಿ ತೊಡಗಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿನಿಮಾ ಲೀಕ್ ಆಗಿದ್ದು ಹೇಗೆ?
ಕ್ಲೌಡ್ ಸ್ಟೋರೇಜ್ ಮತ್ತು ವಿವಿಧ ಲಿಂಕ್ ಶೇರಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಿನಿಮಾವನ್ನು ಅಕ್ರಮವಾಗಿ ಹಂಚಿಕೆ ಮಾಡುತ್ತಿದ್ದ ಆರೋಪದ ಮೇಲೆ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಇವರಿಂದ ಪೈರಸಿಗೆ ಬಳಸಲಾಗಿದ್ದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ಡಿಜಿಟಲ್ ಉಪಕರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
300ಕ್ಕೂ ಹೆಚ್ಚು ಲಿಂಕ್ ಪತ್ತೆ
ಸಿನಿಮಾವನ್ನು ಉಚಿತವಾಗಿ ಡೌನ್‌ಲೋಡ್ ಮಾಡಲು ಲಭ್ಯವಿದ್ದ 300ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಪೊಲೀಸರು ಈಗಾಗಲೇ ಪತ್ತೆಹಚ್ಚಿ ಬ್ಲಾಕ್ ಮಾಡಿದ್ದಾರೆ. ಟೆಲಿಗ್ರಾಂ, ವೆಬ್‌ಸೈಟ್‌ಗಳು ಮತ್ತು ಫೈಲ್ ಶೇರಿಂಗ್ ಸೇವೆಗಳ ಮೇಲೆ ಸೈಬರ್ ತಂಡವು ಹದ್ದಿನ ಕಣ್ಣಿಟ್ಟಿದೆ. ಬಂಧಿತರ ವಿರುದ್ಧ ಹೊಸ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), ಹಕ್ಕುಸ್ವಾಮ್ಯ ಕಾಯ್ದೆ (Copyright Act) ಮತ್ತು ಸಿನೆಮಾಟೋಗ್ರಾಫ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೊಡ್ಡ ಪೈರಸಿ ನೆಟ್‌ವರ್ಕ್
ಕೇವಲ ಈ ಆರು ಜನರಷ್ಟೇ ಅಲ್ಲದೆ, ಇದರ ಹಿಂದೆ ಇರುವ ದೊಡ್ಡ ಪೈರಸಿ ನೆಟ್‌ವರ್ಕ್ ಅನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆಯನ್ನು ವಿಸ್ತರಿಸಿದ್ದಾರೆ. ವಿದೇಶಿ ಸರ್ವರ್‌ಗಳ ಮೂಲಕ ಸಿನಿಮಾ ಹಂಚಿಕೆಯಾಗುತ್ತಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸೈಬರ್ ವಿಭಾಗದ ತಂಡಗಳು ನಿರಂತರವಾಗಿ ಸಾಮಾಜಿಕ ಜಾಲತಾಣಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಹೊಸದಾಗಿ ಲಿಂಕ್‌ಗಳು ಕಾಣಿಸಿಕೊಂಡ ತಕ್ಷಣ ಅವುಗಳನ್ನು ಡಿಲೀಟ್ ಮಾಡಿಸುತ್ತಿವೆ.










