ರಾಜ್ಯದಲ್ಲಿ ಇಂದಿನಿಂದ (ಜೂನ್ 30) ಕೇಂದ್ರ ಚುನಾವಣಾ ಆಯೋಗವು (ECI) ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIR) ಆರಂಭಿಸಿದೆ. ಈ ಪರಿಷ್ಕರಣೆಯನ್ನು ಮೊದಲಿನಿಂದ ಕಾಂಗ್ರೆಸ್ ನಾಯಕರು ವಿರೋಧಿಸುತ್ತಲೇ ಬಂದಿದ್ದಾರೆ. ಇದೀಗ ಬಿಜೆಪಿ ಬೆಂಬಲಿಗರಿಗೆ SIR ಫಾರ್ಮ್ 6 ಸಿಗದಂತೆ ಮಾಡುವ ಸಾಧ್ಯತೆ ಇದೆ. ಅಲ್ಲದೇ ಸರ್ಕಾರ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದೆ ಎಂದು ಮಾಜಿ ಸಿಎಂ ಮತ್ತು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದರು.
ಎಸ್ ಆರ್ ಐ ಕುರಿತು ಮಂಗಳವಾರ ಪ್ರತಿಕ್ರಿಯಿಸಿ ಎಕ್ಸ್ ಪೋಸ್ಟ್ ಮಾಡಿರುವ ಅವರು, ಮೊದಲನೇ ಹಂತದಲ್ಲಿ ಬಿಎಲ್ ಒ ಗಳು ಮನೆ ಮನೆಗೆ ಬಂದು ಫಾರ್ಮ್ 6 ವಿತರಣೆ ಮಾಡುವ ಕಾರ್ಯಕ್ರಮ ಆರಂಭವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಫಾರ್ಮ್ ವಿತರಣೆಯಲ್ಲಿಯೇ ತಾರತಮ್ಯ ಮಾಡಿ ಬಿಜೆಪಿಯ ಬೆಂಬಲಿಗರಿಗೆ ವಿತರಣೆಯಾಗದಂತೆ ನೋಡಿಕೊಳ್ಳುವ ಸಾಧ್ಯತೆ ಗಳಿವೆ ಎಂದು ಅವರು ಹೇಳಿದರು.
ಸರ್ಕಾರದ ಈ ತಾರತಮ್ಯದ ಪ್ಲ್ಯಾನ್ ಕುರಿತು ಜಾಗೃತಿ ವಹಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಮತ್ತು ಮತಗಟ್ಟೆ ಮಟ್ಟದ ಏಜೆಂಟ್ (ಬಿಎಲ್ ಎ) ಅವರು ಅತ್ಯಂತ ಜಾಗೃತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಅವರು ಕರೆ ನೀಡಿದರು.
ಬಿಜೆಪಿ ನಮ್ಮ ಪಕ್ಷದ ಎಲ್ಲ ಬಿಎಲ್ ಎ 2 ಗಳಿಗೆ ವಿನಂತಿಸಿಕೊಳ್ಳುವುದೇನೆಂದರೆ ಬಿಎಲ್ ಒ ಗಳ ಜೊತೆಗೆ ಪ್ರತಿ ಬೂತ್ ನಲ್ಲಿ ಪಾರ್ಮ್ ನಂಬರ್ 6 ವಿತರಣೆಯಾಗುವಂತೆ ನೊಡಿಕೊಳ್ಳಬೇಕು. ಅವುಗಳನ್ನು ಸರಿಯಾದ ರೀತಿ ಭರ್ತಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದಾರೆ.










