ಬೆಂಗಳೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ‘ಎಐ ವಾಟರ್ ಶೃಂಗಸಭೆ 2026’ ಆಯೋಜಿಸಿದ್ದ ಬೆಂಗಳೂರು ಜಲಮಂಡಳಿ ಮತ್ತು ನೀರು ಸರಬರಾಜು ಮಂಡಳಿಯು ಇದೀಗ ಮಹತ್ವದ ಹೆಜ್ಜೆ ಇಟ್ಟಿದೆ. ನಗರದ ಭವಿಷ್ಯದ ನೀರಿನ ಸವಾಲುಗಳನ್ನು ಎದುರಿಸಲು ಜಲಮಂಡಳಿ ನವೀನ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದೆ. ಯುವ ಸ್ಟಾರ್ಟ್-ಅಪ್‌ಗಳಿಗೆ ತಮ್ಮ ವಿನೂತನ ಐಡಿಯಾಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲು ಮುಕ್ತ ಅವಕಾಶ ಸಹ ನೀಡಿದೆ.
ಕಾವೇರಿ ನೀರಿನ ಕಳ್ಳತನ ಹಾಗೂ ನೀರು ಸೋರಿಕೆ ತಡೆಗೆ ಎಐ (AI) ಮತ್ತು ರೋಬೋಟಿಕ್ ತಂತ್ರಜ್ಞಾನದ ಅಳವಡಿಕೆಗೆ ಜಲಮಮಡಳಿ ಅಧಿಕಾರಿಗಳು ಮುಂದಾಗಿದ್ದಾರೆ. ಲೆಕ್ಕಕ್ಕೆ ಸಿಗದ ನೀರು ಹಾಗೂ ಆದಾಯ ತರದ ನೀರಿನ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ, ಜಲಮಂಡಳಿಯು ಸ್ಮಾರ್ಟ್ ಟೆರ್ರಾ (SmartTerra) ಮತ್ತು ಸೊಲಿನಾಸ್ (Solinas) ಎಂಬ ಸ್ಟಾರ್ಟ್-ಅಪ್‌ಗಳ ಜಂಟಿ ಅಧ್ಯಯನಕ್ಕೆ ಒಪ್ಪಿಗೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಧ್ಯಯನವು ಟೈಟಾನ್ ಡಿಸೈನ್ ಇಂಪ್ಯಾಕ್ಟ್ ಅವಾರ್ಡ್ಸ್ 2.0 ಯೋಜನೆಯಡಿ ಆಯ್ಕೆಯಾಗಿದ್ದು, ಟೈಟಾನ್ ಕಂಪನಿ ಲಿಮಿಟೆಡ್‌ನ ಅನುದಾನದಿಂದ ನಡೆಯಲಿದೆ. ವಿಲ್‌ಗ್ರೋ (Villgro) ಇನ್‌ಕ್ಯುಬೇಷನ್ ಹಾಗೂ ವೆಲ್ ಲ್ಯಾಬ್ಸ್ ಈ ಯೋಜನೆಗೆ ತಾಂತ್ರಿಕ ಪಾಲುದಾರರಾಗಿ ಕಾರ್ಯ ನಿರ್ವಹಿಸಲಿವೆ. ಒಂದು ವರ್ಷದ ಅವಧಿಯ ಈ ಅಧ್ಯಯನದಿಂದ ಜಲಮಂಡಳಿಗೆ ಯಾವ ಆರ್ಥಿಕ ಹೊರೆ ಉಮಟಾಗುವುದಿಲ್ಲ. ಬದಲಾಗಿ ಶೂನ್ಯ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ. ಕೇವಲ ಪೈಪ್‌ಗಳ ದುರಸ್ತಿ, ಬದಲಿ ಹಾಗೂ ಉತ್ಖನನದಂತಹ ಅಗತ್ಯ ಸಿವಿಲ್ ಕಾಮಗಾರಿಗಳನ್ನು ಮಾತ್ರ ಜಲಮಂಡಳಿ ತನ್ನ ವ್ಯಾಪ್ತಿಯಲ್ಲಿ ನಿರ್ವಹಿಸಲಿದೆ ಎಂದು ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹತ್ ತಿಳಿಸಿದ್ದಾರೆ.










